ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ನಡೆಯುತ್ತಿರುವ ಗೂಂಡಾಗಿರಿಯನ್ನು ಖಂಡಿಸಿ ಬೆಂಗಳೂರು ನಗರದ ಬಿಜೆಪಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಹದೇವಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಶ್ರೀ ಅರವಿಂದ ಲಿಂಬಾವಳಿ ಅವರು ಕಾಂಗ್ರೆಸ್ ಪ್ರಾಯೋಜಿತ ಭಯೋತ್ಪಾದನೆ ಬೆಂಗಳೂರು ನಗರದ ನಾಗರಿಕರನ್ನು ತಲ್ಲಣಗೊಳಿಸಿದೆ ಎಂದು ಅಭಿಪ್ರಾಯಪಟ್ಟರು.

ಶಾಂತಿಯ ತೋಟವಾಗಿದ್ದ ಬೆಂಗಳೂರು ನಗರವನ್ನು ಅಶಾಂತಿಯ ಕ್ಷೋಭೆಗೆ ದೂಡಿ ಅಪರಾಧಿಗಳ ಸ್ವರ್ಗ ಮಾಡಲು ಸಿದ್ದರಾಮಯ್ಯ ಟೊಂಕ ಕಟ್ಟಿ ನಿಂತಿದ್ದಾರೆ. ಐಟಿ ಸಿಟಿ ಖ್ಯಾತಿಗೆ ಮಸಿ ಬಳಿದು ಕ್ರೈಂ ಸಿಟಿ ಮಾಡಿರುವ ಕುಖ್ಯಾತಿ ಸಿದ್ದರಾಮಯ್ಯಗೆ ದೊರೆತಿದೆ ಎನ್ನುವ ವಿಚಾರವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.

 

ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರೀಸ್ ಅವರ ಪುತ್ರ ಯುವ ಕಾಂಗ್ರೆಸ್ ನಗರ ಉಪಾಧ್ಯಕ್ಷ ಮೊಹಮ್ಮದ್ ನಳಪಾಡ್ ಅವರಿಂದ ಕ್ಷುಲ್ಲಕ ಕಾರಣಕ್ಕಾಗಿ ಯುವಕ ವಿದ್ವತ್ ಮೇಲೆ ಅಮಾನುಷವಾಗಿ ನಡೆದ ಹಲ್ಲೆಯು ನಗರ ಜನತೆಯನ್ನು ಭಯಭೀತಗೊಳಿಸಿದೆ. ವಿದ್ವತ್ ಸದ್ಯ ಆಸ್ಪತ್ರೆಯ ಐಸಿಯುವಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ವಿದ್ವತ್ ಕರುಣಾಜನಕ ಸ್ಥಿತಿಯನ್ನು ನೋಡಿರುವ ಯಾವುದೇ ತಂದೆ ತಾಯಿಗಳು ಮತ್ತೆ ಕಾಂಗ್ರೆಸ್ ಪಕ್ಷ ಬೆಂಬಲಿಸುವ ಧೈರ್ಯ ಮಾಡುವುದಿಲ್ಲ ಎಂದು ಹೇಳಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದ ಇತರ ವಿಷಯಗಳು

 • ಬ್ಯಾಟರಾಯನಪುರದಲ್ಲಿ ಸಚಿವ ಕೃಷ್ಣ ಬೈರೆಗೌಡರ ಬೆಂಬಲಿಗರು ಮತ್ತು ಕಾಂಗ್ರೆಸ್ ಪಾರ್ಟಿಯ ಪುಂಡರಿಂದ ಕಳಪೆ ಕಾಮಗಾರಿ ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ. ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸರು.
 • ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮನೆಯ ಗೋಡೆಯ ಮೇಲೆ ಕಮಲದ ಚಿಹ್ನೆಯನ್ನು ಬರೆಯಲು ಹೋದರೆ ಯಶವಂತಪುರ ವಾರ್ಡಿನ ನಗರ ಪಾಲಿಕೆ ಸದಸ್ಯ ಜಿ.ಕೆ. ವೆಂಕಟೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ “ತಲೆಯ ಮೇಲೆ ಕಲ್ಲು ಎತ್ತಿ ಹಾಕುತ್ತೇನೆ” ಎಂದು ಬೆದರಿಕೆ ಒಡ್ಡಿದ್ದಾರೆ.
 • ನಕಲಿ ಖಾತೆ ಮಾಡಲೊಪ್ಪಲಿಲ್ಲ ಎಂದು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಬೈರತಿ ಬಸವರಾಜ್ ಆಪ್ತರಿಂದ ಹೊರಮಾವು ಬಿಬಿಎಂಪಿ ಕಚೇರಿಯನ್ನೇ ಸುಡುವ ಬೆದರಿಕೆ.
 • ಗಾಂಜಾ ದಂಧೆಯು ನಗರದಲ್ಲಿ ಯಾವುದೆ ಎಗ್ಗಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ರಾಮಸ್ವಾಮಿ ಪಾಳ್ಯದ ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ನಡೆದಿದ್ದೇ ಗಾಂಜಾ ವಿಚಾರವಾಗಿ.
 • ಚಲವಾದಿ ಪಾಳ್ಯ ಬಿಜೆಪಿ ನಗರ ಪಾಲಿಕೆ ಸದಸ್ಯೆಯ ಪತಿ ಕದಿರೇಶ್ ಹತ್ಯೆ ನಡೆದಿದ್ದು ಗಾಂಜಾ ಹಾವಳಿಯನ್ನು ವಿರೋಧಿಸಿದ್ದಕ್ಕಾಗಿ.
 • ಕಳೆದ ವಾರ ಒಂದೇ ದಿನದಲ್ಲಿ ನಗರದಲ್ಲಿ 130 ಕೆಜಿ ಗಾಂಜಾ ವಶಪಡಿಸಿಕೊಂಡುರುವುದು ಈ ಪಿಡುಗು ನಗರದಲ್ಲಿ ಹಬ್ಬಿರುವ ಆಳವನ್ನು ತೋರಿಸುತ್ತದೆ.
 • ಅಂಕುಶವಿಲ್ಲದೆ ಗಾಂಜಾ ದಂಧೆ ನಡೆಯುತ್ತಿರುವುದು ಪ್ರಾಯಶ: ಮುಖ್ಯಮಂತ್ರಿಗಳು ನಗರವನ್ನು ಇದರ ನಶೆಯ ಮೂಲಕವೇ ಬೆಂಗಳೂರನ್ನು “ಡೈನಾಮಿಕ್ ಸಿಟಿ” ಎಂದು ಅನ್ವರ್ಥ ಮಾಡಲು ಹೊರಟಿದ್ದಾರಾ?
 • ಯುಬಿ ಸಿಟಿಯಲ್ಲಿ ಶಾಸಕ ಎನ್ ಎ ಹ್ಯಾರೀಸ್ ಪುತ್ರ ಮೊಹಮದ್ ನಳಪಾಡ್ ಮತ್ತು ಅವನ ಸಹಚರರು ಮಾದಕ ದ್ರವ್ಯ ಸೇವಿಸಿ ಪೈಶಾಚಿಕವಾಗಿ ಹಲ್ಲೆ ಮಾಡಿರುವುದನ್ನು ತಳ್ಳಿಹಾಕಲಾಗದು. ಪೋಲೀಸರು ಈತನಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಬೇಕಿತ್ತು.
 • ನಳಪಾಡ್ ಮತ್ತು ಅವನ ಸಹಚರ ಗೂಂಡಾಗಳನ್ನು ರೌಡಿಶೀಟರ್ ಪಟ್ಟಿಗೆ ಇನ್ನೂ ಸೇರಿಸಿಲ್ಲ.
 • ಸರ್ಕಾರದ ವರ್ತನೆಯು ನಳಪಾಡನನ್ನು ಕಾಪಾಡಲು ಟೊಂಕ ಕಟ್ಟಿ ನಿಂತಿರುವ ಅನುಮಾನ ದಟ್ಟವಾಗಿದೆ.
 • ಆಡಳಿತ ಪಕ್ಷದ ಶಾಸಕರ ಮತ್ತು ಮುಖಂಡರ ಗೂಂಡಾಗಿರಿಯನ್ನು ಮತ್ತು ರೌಡಿಸಂ ಹತ್ತಿಕ್ಕಲು ಸಿದ್ದರಾಮಯ್ಯ ವಿಫಲರಾಗಿದ್ದಾರೆ.
 • ರಾಜ್ಯದಲ್ಲಿ ಮತ್ತು ವಿಶೇಷವಾಗಿ ನಗರದಲ್ಲಿ ಗೂಂಡಾಪಡೆಗಳಿಗೆ ದೊರೆಯುತ್ತಿರುವ ಸಿದ್ದು ಸರ್ಕಾರದ ಬೆಂಬಲ ಮುಂಬರಲಿರುವ ಚುನಾವಣೆಯಲ್ಲಿ ಇವರನ್ನು ಬಳಸಿಕೊಂಡು ತಮ್ಮ ವಿರೋಧಿಗಳನ್ನು ಮಟ್ಟ ಹಾಕಲು ಬಳಸುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು.
 • ಈ ಹಿಂದೆ ಮೈಸೂರು ಜಿಲ್ಲಾಧಿಕಾರಿ ಶಿಖಾರವರ ಮೇಲೆ ಸಿದ್ದರಾಮಯ್ಯ ಪರಮಾಪ್ತ ಮರೀಗೌಡ ದುವರ್ತನೆಯನ್ನು ತೋರಿದ್ದ. ಆದರೆ ಆತನ ವಿರುದ್ದ ಕಾಟಾಚಾರಕ್ಕೆ ಕ್ರಮ ಜರುಗಿಸಿ ಪ್ರಕರಣವನ್ನು ಮುಚ್ಚಿಹಾಕಿದರು.
 • ಶಾಸಕ ವಿಜಯಾನಂದ ಕಾಶಪ್ಪ ಯುಬಿ ಸಿಟಿ ಸ್ಕೈ ಬಾರ್ ನಲ್ಲಿ ಪೋಲಿಸರ ಮೇಲೇ ಹಲ್ಲೆ ನಡೆಸಿದ್ದರು. ಸರಕಾರ ಅವರ ಬೆಂಬಲಕ್ಕೆ ನಿಂತಿತು.
 • ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರಕಾರವೇ ಪುಂಡು ಪೋಕರಿಗಳ ಪರವಾಗಿ ನಿಂತಿರುವುದರಿಂದ ಆಡಳತ ಪಕ್ಷದ  ಸದಸ್ಯರುಗಳು ಭಯವಿಲ್ಲದೆ ಸ್ವೇಚ್ಛಾಚಾರದಿಂದ ವರ್ತಿಸುತ್ತಿದ್ದಾರೆ.