ಜನವಿರೋಧಿ ಕಾಂಗ್ರೆಸ್‌ನ ಅಡೆತಡೆ
ನೀವು ಕೊಟ್ಟ ತೆರಿಗೆಗೆ ನ್ಯಾಯ ಒದಗಿಸದ ಕಾಂಗ್ರೆಸ್ ಸರ್ಕಾರ
ಈಗಿರುವ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿರುವ ಮಹದೇವಪುರ ಕ್ಷೇತ್ರದ ಬಗ್ಗೆ ಮಲತಾಯಿ ಧೋರಣೆ ತಳೆದಿದೆ. ರಾಜ್ಯ ಸರ್ಕಾರವು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಉದ್ದೇಶಪೂರ್ವಕವಾಗಿ ಕಡೆಗಾಣಿಸಿದೆ. ಹಿಂದಿದ್ದ ಬಿ.ಜೆ.ಪಿ ಸರ್ಕಾರ ಮಹದೇವಪುರಕ್ಕೆ ಮಂಜೂರು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಈಡೇರಿಸದೇ ಮಹದೇವಪುರದ ಜನತೆಗೆ ಭಾರೀ ಅನ್ಯಾಯ ಎಸಗಿದೆ. ಉದಾಹರಣೆಗೆ ಈ ಕೆಳಗಿನ ಕಾಮಗಾರಿಗಳು ಹಿಂದಿನ ಬಿ.ಜೆ.ಪಿ ಸರ್ಕಾರದಲ್ಲಿ ಮಂಜೂರಾಗಿದ್ದರೂ ಕಾಂಗ್ರೆಸ್ ಸರ್ಕಾರದ ದುರುದ್ದೇಶದಿಂದ ಇನ್ನೂ ಆರಂಭವಾಗದೆ ಕುಳಿತಿವೆ.
ಹೆಚ್ಚು ತೆರಿಗೆ ಪಾವತಿಯಾದರೂ,ಅತ್ಯಂತ ಕಡಿಮೆ ಅನುದಾನ
ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಪೈಕಿ ಮಹದೇವಪುರ ವಿಧಾನಸಭಾ ಕ್ಷೇತ್ರವು ಬಿ.ಬಿ.ಎಂ.ಪಿ ಗೆ ಅತ್ಯಂತ ಹೆಚ್ಚಿನ ತೆರಿಗೆಯನ್ನು ಪಾವತಿಸುತ್ತಿದೆ. ೨೦೧೩-೧೪ರ ಸಾಲಿನಿಂದ ಇದುವರೆಗೂ ಮಹದೇವಪುರ ಕ್ಷೇತ್ರದಿಂದ ಬಿಬಿಎಂಪಿಗೆ ಸುಮಾರು ರೂ. ೧೭೫೦ ಕೋಟಿ ಸಂದಾಯವಾಗಿದೆ. ಇದಕ್ಕಿಂತಲೂ ಹೆಚ್ಚು ಪ್ರಮಾಣದ ತೆರಿಗೆಗಳನ್ನು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ತುಂಬಲಾಗಿದೆ. ಆದರೆ ಪ್ರತಿಯಾಗಿ ಮಹದೇವಪುರಕ್ಕೆ ನೀಡಿರುವ ಅನುದಾನವು ಅತ್ಯಂತ ಕಡಿಮೆ. ಇದರ ಫಲವಾಗಿ ನೂರಾರು ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಈ ಅನುದಾನ ಹಂಚಿಕೆಯಲ್ಲಿನ ತಾರತಮ್ಯವನ್ನು ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಲಾಗಿದೆ. ಆದರೆ ಇದೇ ಅವಧಿಯಲ್ಲಿ ನೆರೆಹೊರೆಯ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅಪಾರ ಪ್ರಮಾಣದ ನಿಧಿ ಬಿಡುಗಡೆ ಮಾಡಲಾಗಿದೆ.
ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿಗೆ ಅಡ್ಡಗಾಲು
ಬೈಯ್ಯಪ್ಪನಹಳ್ಳಿಯಿಂದ ಚನ್ನಸಂದ್ರ ರಾಜ್ಯ ಹೆದ್ದಾರಿ ೨೦೮ರವರೆಗೆ ಹಾಗೂ ಹಳೇ ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿ ೪ರವರೆಗಿನ ಎರಡು ಸಿಗ್ನಲ್ ಫ್ರೀ ಕಾರಿಡಾರ್ ರಸ್ತೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಂಜೂರಾಗಿದ್ದು ಈಗಿನ ಸನ್ಮಾನ್ಯ ಮುಖ್ಯಮಂತ್ರಿಯವರು ಕಾಮಗಾರಿಗೆ ಚಾಲನೆ ನೀಡಿ ನಾಲ್ಕು ವರ್ಷ ಕಳೆದಿದ್ದರೂ ಕಾಮಗಾರಿ ವಿಳಂಬವಾಗಿ ನಡೆಯುತ್ತಿದೆ.
ಕಸ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾದ ಸರ್ಕಾರ; ತಪ್ಪದ ಬವಣೆ
ಮಂಡೂರಿನಲ್ಲಿ ಕಸ ಹಾಕುತ್ತಿದ್ದುದನ್ನು ಹಲವಾರು ಪ್ರತಿಭಟನೆಗಳ ನಂತರ ಸ್ಥಗಿತಗೊಳಿಸಿದ್ದು ಆಗ ಸರ್ಕಾರವು ಒಂದು ವರ್ಷದೊಳಗೆ ಪೂರ್ಣ ತ್ಯಾಜ್ಯವನ್ನು ತೆರವುಗೊಳಿಸುವುದಾಗಿ ತಿಳಿಸಿ ನಾಲ್ಕು ವರ್ಷ ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ.
ಮಿಟ್ಟಿಗಾನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ಸುರಿಯುತ್ತಿರುವುದನ್ನು ನಿಲ್ಲಿಸಲು ಹಲವಾರು ಪ್ರತಿಭಟನೆಗಳ ಬಳಿಕ ೩ ತಿಂಗಳು ಕಾಲಾವಕಾಶ ಕೇಳಿ ಪಡೆಯಲಾಗಿದ್ದರೂ ಅದು ಇನ್ನೂ ನಿಂತಿಲ್ಲ. ಕ್ಷೇತ್ರದಲ್ಲಿನ ಕಸ ವಿಲೇವಾರಿ ಮಾಡಲು ಸರ್ಕಾರಿ ಭೂಮಿಯನ್ನು ಕೇಳಿದ್ದರೂ ಸರ್ಕಾರವು ಇನ್ನೂ ಕೊಟ್ಟಿಲ್ಲ.
ಮಲಿನ ಕೆರೆಗಳ ಅಭಿವೃದ್ಧಿ ನಿರ್ಲಕ್ಷ್ಯ, ನ್ಯಾಯಾಲಯ ಆದೇಶ ತಿರಸ್ಕಾರ
ವರ್ತೂರು ಮತ್ತು ಬೆಳ್ಳಂದೂರು ಕೆರೆಗಳ ಅಭಿವೃದ್ಧಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವೇ ಆದೇಶ ನೀಡಿದ್ದರೂ ರಾಜ್ಯ ಸರ್ಕಾರವು ಈವರೆಗೂ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಅಲ್ಲದೇ ಕೇಂದ್ರ ಸರ್ಕಾರದಿಂದ ಬಂದ ಅನುದಾನವನ್ನೂ ಬಳಸಿಕೊಂಡಿಲ್ಲ.
ರಾಂಪುರ ಕೆರೆಯೂ ಬೆಳ್ಳಂದೂರು ಕೆರೆಯ ಹಾಗೆಯೇ ಮಲಿನಗೊಳ್ಳುತ್ತಿದೆ. ಆದರೆ ರಾಜ್ಯ ಸರ್ಕಾರವು ಮಾತ್ರ ಈ ಕೆರೆಯನ್ನು ಸುಧಾರಿಸಲು ಯಾವುದೇ ಅಭಿವೃದ್ಧಿ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಮಹದೇವಪುರ ಕ್ಷೇತ್ರದ ಇನ್ನೂ ಹಲವು ಕೆರೆಗಳನ್ನು ಅಭಿವೃದ್ಧಿಪಡಿಸಲು ಒತ್ತಡ ಹಾಕುತ್ತಿದ್ದರೂ ರಾಜ್ಯ ಸರ್ಕಾರವು ಮಾತ್ರ ನಿರ್ಲಕ್ಷ್ಯ ತೋರಿದೆ; ಕೆಲವೇ ಕೆರೆಗಳ ಅಭಿವೃದ್ಧಿ ಮಾಡುತ್ತ ಉಳಿದವುಗಳನ್ನು ಮರೆತಿದೆ.
ನೆನೆಗುದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು
ಬಿದರಹಳ್ಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿದ್ದು, ಇದುವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ; ಕಂದಾಯ ಇಲಾಖೆಯವರು ಜಮೀನು ನೀಡಿಲ್ಲ. ಕೊಡತಿ ಮತ್ತು ಹಾಲನಾಯಕನಹಳ್ಳಿ ಮತ್ತು ಮಂಡೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಿದ್ಧವಾಗಿದ್ದರೂ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ; ಹೀಗಿದ್ದೂ ಸಾರ್ವಜನಿಕ ಹಿತ ಮತ್ತು ಕಟ್ಟಡದ ಸದ್ಬಳಕೆಗಾಗಿ ನಾನೇ ಖುದ್ದು ನಿಂತು ಸೇವೆ ಆರಂಭಿಸಿದ್ದೇನೆ. ಇನ್ನು ಮಾರತ್ತಹಳ್ಳಿ ಮತ್ತು ಕಣ್ಣೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಿದ್ಧವಾಗಿವೆ.
ಆಸ್ಪತ್ರೆಗೆ ಜಮೀನು ನೀಡಲು ನಿರುತ್ಸಾಹ
ಸಿದ್ಧಾಪುರದಲ್ಲಿ ೧೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಲು ಅನುದಾನ ಬಿಡುಗಡೆಯಾಗಿದೆ. ಬಿ.ಎಂ.ಟಿ.ಸಿ ವತಿಯಿಂದ ಆರೋಗ್ಯ ಇಲಾಖೆಗೆ ಜಮೀನು ಹಸ್ತಾಂತರ ಮಾಡುವಲ್ಲಿ ಸರ್ಕಾರ ನಿರುತ್ಸಾಹ ತೋರಿಸುತ್ತಿದೆ.
ಮೀಸಲಿಟ್ಟ ಒತ್ತುವರಿ ಭೂಮಿ ಬಳಕೆಯಿಲ್ಲ; ಒತ್ತುವರಿಗೆ ತಡೆಯಿಲ್ಲ!
ನಾನು ಶಾಸಕನಾದ ಮೊದಲ ಅವಧಿಯಲ್ಲಿಯೇ ೨೭೦ಕ್ಕೂ ಹೆಚ್ಚು ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿಯಿಂದ ಮುಕ್ತಗೊಳಿಸಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಲಾಗಿತ್ತು. ಅವುಗಳಲ್ಲಿ ಪ್ರಮುಖವಾಗಿ ಗುಂಜೂರು ಗ್ರಾಮದ ಸ.ನಂ. ೧೦೪ರಲ್ಲಿ ೨೭.೦೪ ಎಕರೆ ಜಮೀನನ್ನು ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣಕ್ಕಾಗಿ ಕಾಯ್ದಿರಿಸಲಾಗಿತ್ತು. ಆದರೆ ರಾಜ್ಯ ಸರ್ಕಾರವು ಈ ಕ್ರೀಡಾಂಗಣ ಅಭಿವೃದ್ಧಿಗೆ ಯಾವುದೇ ಅನುದಾನವನ್ನೂ ನೀಡಿಲ್ಲ. ಇದರಿಂದ ಕ್ಷೇತ್ರವು ಜಾಗತಿಕ ಮಹತ್ವದ ಕ್ರೀಡಾ ತಾಣ ರೂಪಿಸುವಲ್ಲಿ ಹಿಂದೆ ಬಿದ್ದಿದೆ.
ದೊಡ್ಡಕನ್ನಲ್ಲಿ ಗ್ರಾಮದಲ್ಲಿ ರಂಗಮಂದಿರ ನಿರ್ಮಾಣಕ್ಕಾಗಿ ೨.೦ ಎಕರೆ ಜಮೀನನ್ನು, ವೇಮನ ಅಂತಾರಾಷ್ಟ್ರೀಯ ಸಭಾಂಗಣ ನಿರ್ಮಾಣಕ್ಕಾಗಿ ೪ ಎಕರೆಗಳನ್ನು ಕಾಯ್ದಿರಿಸಲಾಗಿತ್ತು. ಆದರೆ ರಾಜ್ಯ ಸರ್ಕಾರವು ಇವಾವುದಕ್ಕೂ ಅನುದಾನ ನೀಡಿಲ್ಲ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಂಜೂರು ಗ್ರಾಮದಲ್ಲಿ ಬಿಡಿಎ ವತಿಯಿಂದ ಮನೆಗಳ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು; ಕೊಡತಿ ಗ್ರಾಮದಲ್ಲಿ ೫ ಎಕರೆ ಪ್ರದೇಶದಲ್ಲಿ ಭಾಗ್ಯ-ಸಂಪದ-ಯಶಸ್ಸು (ಬಿಎಸ್‌ವೈ) ಯೋಜನೆಯಿಂದ ೫೦೦ ಮನೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. ಈಗಿನ ಸರ್ಕಾರದ ನಿರ್ಲಕ್ಷದಿಂದಾಗಿ ಈ ಕಾಮಗಾರಿಯು ಇನ್ನೂ ಪೂರ್ಣಗೊಂಡಿಲ್ಲ.
ಮಹದೇವಪುರದಲ್ಲಿ ಇನ್ನೂ ಹಲವು ರಾಜಕಾಲುವೆಗಳು, ಸರ್ಕಾರಿ ಜಮೀನು ಪ್ರದೇಶಗಳು ಮತ್ತು ಕೆರೆಗಳು ಒತ್ತುವರಿಯಾಗಿದ್ದು ಇವುಗಳ ಬಗ್ಗೆ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಲು ಒತ್ತಾಯಿಸಿದ್ದರೂ ರಾಜ್ಯ ಸರ್ಕಾರವು ಸಂಪೂರ್ಣ ನಿರ್ಲಕ್ಷ್ಯ ತೋರಿದೆ.
ರಸ್ತೆ, ಓವರ್/ಅಂಡರ್ ಬ್ರಿಡ್ಜ್ ನಿರ್ಮಾಣ, ಹೊಸ ಮಾರುಕಟ್ಟೆಗೆ ಅಡ್ಡಗಾಲು
ಪೂರ್ವ ವಿಮಾನ ನಿಲ್ದಾಣ ಸಂಪರ್ಕ ರಸ್ತೆ (ಈಸ್ಟರ್ನ್ ಏರ್‌ಪೋರ್ಟ್ ಅಪ್ರೋಚ್ ರೋಡ್) ಕ್ಷೇತ್ರದ ಒಂದು ಪ್ರಮುಖ ಸಂಪರ್ಕ ರಸ್ತೆಯಾಗಿ ಈಗಾಗಲೇ ಜನಬಳಕೆಗೆ ಮುಕ್ತವಾಗಬೇಕಿತ್ತು. ರಾಜ್ಯ ಸರ್ಕಾರವು ಈ ಮಹತ್ವದ ಕಾಮಗಾರಿಯ ಬಗ್ಗೆ ಸಂಪೂರ್ಣ ನಿರಾಸಕ್ತಿ ತೋರುತ್ತಿದೆ.
ಚಿನ್ನಪ್ಪನಹಳ್ಳಿ, ಮುನ್ನೇಕೊಳಾಲು, ಕಾರ್ಮಲರಾಂ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ತಡೆಯಲು ರೈಲ್ವೆ ಖಔಃ/ಖUಃ (ರೇಲ್ವೆ ಓವರ್‌ಬ್ರಿಡ್ಜ್ ಮತ್ತು ರೈಲ್ವೆ ಅಂಡರ್‌ಬ್ರಿಡ್ಜ್) ನಿರ್ಮಿಸಲು ಯಾವುದೇ ಅನುದಾನವನ್ನೂ ರಾಜ್ಯ ಸರ್ಕಾರ, ಬಿಬಿಎಂಪಿ ನೀಡಿಲ್ಲ. ಪಣತ್ತೂರು ಹಾಗೂ ದೊಡ್ಡನೆಕ್ಕುಂದಿಯಲ್ಲಿ ಹೆಚ್ಚುವರಿ ವೆಂಟ್ ಅಳವಡಿಸಲು ಕೇಳಿದ್ದರೂ ಕ್ರಮ ಕೈಗೊಂಡಿಲ್ಲ.
ವರ್ತೂರು ಮಾರುಕಟ್ಟೆಯನ್ನು ಬೇರೆ ಪ್ರದೇಶಕ್ಕೆ ವರ್ಗಾಯಿಸಲು ಮತ್ತು ಈಗಿರುವ ಸ್ಥಳದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ರಾಜ್ಯ ಸರ್ಕಾರವು ಈ ಕಾರ್ಯಕ್ಕಾಗಿ ಜಮೀನನ್ನೇ ಹಸ್ತಾಂತರ ಮಾಡದೆ ಸಾರ್ವಜನಿಕ ಬೇಜವಾಬ್ದಾರಿ ಪ್ರದರ್ಶಿಸಿದೆ.
ಕಾಲೇಜು ಕಟ್ಟಡ, ಅಂತಾರಾಷ್ಟ್ರೀಯ ಕ್ರೀಡಾಂಗಣದ ಬಗ್ಗೆ ನಿರಾಸಕ್ತಿ!
ಕಾಡುಗೋಡಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ ೨ ಎಕರೆ ಜಮೀನು ಮಂಜೂರಾಗಿತ್ತು; ಈ ಕಾಮಗಾರಿಗೂ ಸರ್ಕಾರವು ಯಾವುದೇ ಅನುದಾನ ನೀಡಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಕಳೆದ ನಾಲ್ಕು ವರ್ಷಗಳಿಂದ ಪರದಾಡುವಂತಾಗಿದೆ.
ವರ್ತೂರು ಮತ್ತು ಹೂಡಿ ಆಟದ ಮೈದಾನಗಳನ್ನು ಅಭಿವೃದ್ಧಿ ಪಡಿಸಲು ಭಾರೀ ಒತ್ತಡ ಹಾಕಿದರೂ ಸರ್ಕಾರವು ಈ ಕಾರ್ಯದ ಬಗ್ಗೆ ಆಸಕ್ತಿಯನ್ನೇ ಪ್ರದರ್ಶಿಸಿಲ್ಲ.
ಉದ್ಘಾಟನೆ ರದ್ದು: ಇಮ್ಮಡಿಹಳ್ಳಿ ಪಾಲಿಟೆಕ್ನಿಕ್ ಹಾಗೂ ವರ್ತೂರು ಪ್ರಥಮದರ್ಜೆ ಕಾಲೇಜು ಸಿದ್ಧವಾಗಿ ಉದ್ಘಾಟನೆಯ ಆಹ್ವಾನ ಪತ್ರವನ್ನು ಮುದ್ರಿಸಿದ ಮೇಲೆ ಕಾರ್ಯಕ್ರಮವನ್ನು ರಾಜ್ಯಸರ್ಕಾರದ ಪಕ್ಷಪಾತದಿಂದಾಗಿ ರದ್ದಾಯಿತು. ಕಟ್ಟಡದ ಸದ್ಬಳಕೆಗಾಗಿ ಇವುಗಳ ಕಾರ್ಯಾಚರಣೆ ಆರಂಭಿಸಿದ್ದೇನೆ. ಮಂಡೂರು ಬಸ್ ಡಿಪೋದ ಕಥೆಯೂ ಹೀಗೆಯೇ ಇದೆ. ಅಲ್ಲೂ ಉದ್ಘಾಟನೆಯಿಲ್ಲದೆ ಜನಸೇವೆ ಆರಂಭವಾಗಿದೆ.
ಡಿಜಿಟಲ್ ಗ್ರಂಥಾಲಯಕ್ಕೆ ಬಾರದ ಅನುದಾನ
ತೂಬರಹಳ್ಳಿಯಲ್ಲಿ ಡಿಜಿಟಲ್ ಗ್ರಂಥಾಲಯ ಕಟ್ಟಡ ಪೂರ್ಣಗೊಂಡಿದೆ; ಆದರೆ ಗ್ರಂಥಾಲಯ ಆರಂಭಿಸಲು ಅನುದಾನ ಬಿಡುಗಡೆಯಲ್ಲಿ ವಿಳಂಬವಾಗಿದೆ.
ಕಾಂಗ್ರೆಸ್ ಹೇಳೋದು ಸಾಮಾಜಿಕ ನ್ಯಾಯ, ಮಾಡಿದ್ದು ಬರೀ ಅನ್ಯಾಯ