ವ್ಯಕ್ತಿಚಿತ್ರ
ಮಹದೇವಪುರ ಕ್ಷೇತ್ರದ ಜನತೆಯ ಮನೆ-ಮನಗಳನ್ನು ಪ್ರವೇಶಿಸಿ ಮುಕ್ತವಾಗಿ ಮಾತನಾಡುವ, ಜನರೊಂದಿಗೇ ಬೆರೆತು ಕಷ್ಟ – ಸುಖಗಳನ್ನು ಅರಿಯುವ ಸ್ವಭಾವ ಅರವಿಂದ ಲಿಂಬಾವಳಿಯವರಿಗೆ ವಿದ್ಯಾರ್ಥಿ ದೆಸೆಯಿಂದಲೂ ಬಂದಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿ ಆಂದೋಳನಗಳ ಮೂಲಕವೇ ಅರವಿಂದ ಲಿಂಬಾವಳಿ ಬೆಳೆದಿದ್ದಾರೆ. ಎಪ್ಪತ್ತರ ದಶಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಹಾಗೂ ಎಂಬತ್ತರ ದಶಕದ ಆರಂಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಅಭಾವಿಪ) ಕಾರ್ಯಕರ್ತರಾಗಿ ಸಾಮಾಜಿಕ ಜೀವನ ಆರಂಭಿಸಿದ ಅರವಿಂದ ಲಿಂಬಾವಳಿಯವರು ೧೯೮೬ರಿಂದ ಆರು ವರ್ಷಗಳ ಕಾಲ ಅಭಾವಿಪ ರಾಜ್ಯ ಸಹಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಪಾಲಿಟೆಕ್ನಿಕ್ ಶಿಕ್ಷಣ ರಂಗದ ಸಮಸ್ಯೆಗಳ ವಿರುದ್ಧ ಹೋರಾಡಲು ೧೯೮೭ರಲ್ಲಿ ಮೂಡಿದ ಕರ್ನಾಟಕ ರಾಜ್ಯ ಪಾಲಿಟೆಕ್ನಿಕ್ ಕ್ರಿಯಾಸಮಿತಿ ಸಂಚಾಲಕರಾದ ಅರವಿಂದ ಲಿಂಬಾವಳಿ ಅವರಲ್ಲಿ ಕಂಡಿದ್ದು ಯುವೋತ್ಸಾಹದ ಕಿಚ್ಚು. ವಿದ್ಯಾರ್ಥಿ ಆಂದೋಲನದಲ್ಲಿ ಭಾಗಿಯಾಗಿ ಬದಲಾವಣೆ ತರಬೇಕೆಂಬ ತವಕ.
ಶಿಕ್ಷಣ ದುರವಸ್ಥೆ ವಿರುದ್ಧ ಹೋರಾಟದ ಸರಮಾಲೆ
ಆಗಷ್ಟೇ ರಾಜ್ಯದೆಲ್ಲೆಡೆ ನೂರಾರು ಪಾಲಿಟೆಕ್ನಿಕ್‌ಗಳು ನಾಯಿಕೊಡೆಗಳಂತೆ ತಲೆಯೆತ್ತಿದ್ದವು. ಕಳಪೆ ಮೂಲಸೌಕರ್ಯ, ದುರವಸ್ಥೆಯಿಂದ ಕೂಡಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಶೋಷಿಸುತ್ತಿದ್ದವು. ಶಿಕ್ಷಣರಂಗದ ಈ ದುಸ್ಥಿತಿಯನ್ನು ಪ್ರತಿಭಟಿಸಿ ಅರವಿಂದ ಲಿಂಬಾವಳಿ ಹೋರಾಟಕ್ಕೆ ಧುಮುಕಿದರು. ಅವರು ನಾಡಿನ ನೂರಾರು ಪಾಲಿಟೆಕ್ನಿಕ್‌ಗಳ ದುರವಸ್ಥೆಯ ಸಮೀಕ್ಷಾವರದಿಯನ್ನು ಸಿದ್ಧಪಡಿಸಿದಾಗ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. `ಸುಧಾ’ ವಾರಪತ್ರಿಕೆಯು `ಪಾಲಿಟೆಕ್ನಿಕ್‌ಗಳ ಕಥೆ ವ್ಯಥೆ’ ಎಂಬ ಅಗ್ರಲೇಖನ ಪ್ರಕಟಿಸಿ ಜನಾಭಿಪ್ರಾಯ ರೂಪಿಸಿದ್ದು ಈಗ ಇತಿಹಾಸ. ಇಂಜಿನಿಯರಿಂಗ್ ಶಿಕ್ಷಣದ ಕುರಿತೂ ಅವರ ಹೋರಾಟ ಗಮನಾರ್ಹ.
ರಾಜ್ಯದ ಶಿಕ್ಷಣ ವ್ಯವಸ್ಥೆ ಸುಧಾರಿಸಲು ೧೨೦ ಬೇಡಿಕೆಗಳನ್ನು ಮುಂದಿಟ್ಟು ನಡೆದ ೧೯೯೨ರ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಬೃಹತ್ `ಕ್ಯಾಂಪಸ್ ಉಳಿಸಿ’ ರ್‍ಯಾಲಿಯ ಸಂಘಟನೆಯಲ್ಲಿ ರ್‍ಯಾಲಿಯ ಸಂಚಾಲಕರಾಗಿದ್ದ ಅರವಿಂದ ಲಿಂಬಾವಳಿಯವರದೇ ಪ್ರಮುಖ ಪಾತ್ರ. ಈ ರ್‍ಯಾಲಿಯು ಈಗಲೂ ಒಂದು ರಾಷ್ಟ್ರೀಯ ದಾಖಲೆ.
ಅಷ್ಟು ಹೊತ್ತಿಗೆ ಅಭಾವಿಪ ರಾಷ್ಟ್ರೀಯ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದ ಅರವಿಂದ ಲಿಂಬಾವಳಿಯವರು ಕಾಶ್ಮೀರ ಉಳಿಸಿ ಆಂದೋಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅಭಾವಿಪದ ರಾಜ್ಯ ಕಾರ್ಯದರ್ಶಿಯಾಗಿಯೂ ವಿದ್ಯಾರ್ಥಿ ಹೋರಾಟವನ್ನು ಮುಂದುವರಿಸಿದ ಅವರು ೧೯೯೫ರಲ್ಲಿ ಹಿರಿಯರ ಅಪೇಕ್ಷೆಯಂತೆ ಪಕ್ಷ ರಾಜಕಾರಣವನ್ನು ಪ್ರವೇಶಿಸಿದರು.
ಬಿಜೆಪಿ ಪ್ರವೇಶ : ಸಾರ್ವಜನಿಕ ಸೇವೆಯ ಹೊಸ ಅಧ್ಯಾಯ
ಆರಂಭದಲ್ಲಿ ಭಾರತೀಯ ಜನತಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಅರವಿಂದ ಲಿಂಬಾವಳಿಯವರು, ಕೆಲ ತಿಂಗಳುಗಳಲ್ಲೇ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದರು. ೧೨ ವರ್ಷಗಳ ಕಾಲ ಈ ಹುದ್ದೆಯಲ್ಲೇ ಇದ್ದು ಪಕ್ಷದ ಸಂಘಟನೆಗಾಗಿ ಶ್ರಮಿಸಿದರು. ರಾಜಕೀಯ ವ್ಯವಹಾರಗಳಿಂದ ಹಿಡಿದು ಮಾಧ್ಯಮ ನಿರ್ವಹಣೆ, ಚುನಾವಣಾ ನಿರ್ವಹಣೆ, ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ – ಹೀಗೆ ಹಲವು ಸಂಘಟನಾತ್ಮಕ ಹೊಣೆಗಾರಿಕೆಗಳನ್ನು ನಿಭಾಯಿಸಿದ ಅರವಿಂದ ಲಿಂಬಾವಳಿ ಸಮಾಜದ ಎಲ್ಲ ವರ್ಗ-ಸಮುದಾಯ-ಪಂಗಡಗಳ ಸಮಸ್ಯೆಗಳನ್ನು ಅರಿತರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಅವರು ಪಕ್ಷದ ಚಟುವಟಿಕೆಗಳನ್ನು ಕೈಗೊಂಡರು.
ತಮ್ಮ ಜನಪರ ವ್ಯಕ್ತಿತ್ವದಿಂದಲೇ ಅರವಿಂದ ಲಿಂಬಾವಳಿಯವರು ೨೦೦೪ರಲ್ಲಿ ವಿಧಾನ ಪರಿಷತ್ ಸದಸ್ಯರಾದರು. ಆನಂತರ ೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ಮಹದೇವಪುರದ ಜನತೆಯ ಪ್ರತಿನಿಧಿಯಾಗಿದ್ದು, ಈಗ ಕ್ಷೇತ್ರದ ಪ್ರೀತಿ – ಅಭಿಮಾನ ಪಡೆದ ಶಾಸಕರಾಗಿದ್ದು ಹೊಸ ಇತಿಹಾಸ!
ಜನಪ್ರತಿನಿಧಿ, ಸಂಪುಟ ಸಚಿವ
ಜನಪ್ರತಿನಿಧಿಯಾದ ಸಂದರ್ಭದಲ್ಲೂ ಅವರೊಳಗೆ ಇರುವ ಹೋರಾಟಗಾರ ವ್ಯಕ್ತಿತ್ವ ಮಾಸಿಲ್ಲ; ಜನಪರ ಕೆಲಸಕ್ಕಾಗಿ ಶ್ರಮಿಸುವ ಕಿಚ್ಚು ಆರಿಲ್ಲ. ಈಗ ಮಹದೇವಪುರ ಕ್ಷೇತ್ರದ ಸಮಸ್ಯೆಗಳ ವಿರುದ್ಧವೂ ಹೋರಾಡಿ ಗೆದ್ದಿದ್ದಾರೆ! ಒಂದು ದಶಕಕ್ಕೂ ಹೆಚ್ಚು ಕಾಲ ಯುವ ಹೋರಾಟದ ನಾಯಕತ್ವ, ಆಮೇಲೆ ಹಲವು ವರ್ಷಗಳ ಸಕ್ರಿಯ ರಾಜಕಾರಣ, ನಂತರ ಮೇಲ್ಮನೆ ಸದಸ್ಯತ್ವದ ಅನುಭವ – ಅರವಿಂದ ಲಿಂಬಾವಳಿ ಮಹದೇವಪುರ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಯಶ ಸಾಧಿಸಲು ಇವೆಲ್ಲವೂ ಅನುಕೂಲಕರವಾಗಿ ಒದಗಿದವು.
ಅರವಿಂದ ಲಿಂಬಾವಳಿಯವರ ಇನ್ನೊಂದು ಸ್ವಭಾವ ಸಾರ್ವಜನಿಕರಿಗೆ ತಕ್ಷಣ ಕಾಣುವುದಿಲ್ಲ; ಕ್ರಮೇಣ ಅರಿವಾಗುತ್ತದೆ. ಅವರು ಎಂದೂ ತಮ್ಮ ಗಮನಕ್ಕೆ ಬಂದ ಸಂಗತಿಯನ್ನು ಮರೆಯುವುದಿಲ್ಲ; ನೇಪಥ್ಯದಲ್ಲಿಯೇ ಆ ಕೆಲಸದ ಬಗ್ಗೆ ಫಾಲೋ ಅಪ್ ಮಾಡುತ್ತಿರುತ್ತಾರೆ. ಅದು ಮುಗಿದ ಮೇಲೆಯೇ ಜನರಿಗೆ ಗೊತ್ತಾಗಿರುತ್ತದೆ. ವೃಥಾ ಚರ್ಚೆ, ಕಾಡುಹರಟೆ ಮತ್ತು ಕಾಲಹರಣಕ್ಕಿಂತ `ಟು ದಿ ಪಾಯಿಂಟ್ ನೀತಿ ಅನುಸರಿಸುವುದೇ ಅರವಿಂದ ಲಿಂಬಾವಳಿಯವರ ಸಹಜ ವ್ಯಕ್ತಿತ್ವ. ಆದ್ದರಿಂದಲೇ ಅವರು ತಮ್ಮ ಕ್ಷೇತ್ರದ ಎಲ್ಲ ಕಾಮಗಾರಿಗಳನ್ನೂ ವಾರ್ಡ್‌ವಾರು ಪಟ್ಟಿ ಮಾಡಿಕೊಂಡು ಕಡತಗಳನ್ನು ನಿರ್ವಹಿಸಿದ್ದಾರೆ. ಯಾವುದೇ ಪ್ರದೇಶದ ಯಾವುದೇ ಕಾಮಗಾರಿಯ ವಿವರಗಳನ್ನು ಸಾರ್ವಜನಿಕರು `ಮಾಹಿತಿ ಹಕ್ಕು’ ಚಲಾಯಿಸದೆಯೇ ನೇರವಾಗಿ ಪಡೆಯಬಹುದು!
ಮೊದಲ ಎರಡೂಕಾಲು ವರ್ಷಗಳ ಕಾಲ ಉನ್ನತ ಶಿಕ್ಷಣ ಸಚಿವರಾಗಿದ್ದ ಅರವಿಂದ ಲಿಂಬಾವಳಿಯವರು ರಾಜ್ಯದ ಶಿಕ್ಷಣ ರಂಗಕ್ಕೆ ಹೊಸ ಚಹರೆ ನೀಡಿದರು. ಆದರೆ ಈ ಕಾಲಾವಧಿಯಲ್ಲೂ ಅವರು ಕ್ಷೇತ್ರದ ಉನ್ನತಿಯನ್ನು ಮರೆಯಲಿಲ್ಲ. ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರೂ ಆಗಿದ್ದ ಅರವಿಂದ ಲಿಂಬಾವಳಿ ಕ್ಷೇತ್ರದ ಅಭ್ಯುದಯಕ್ಕೇ ಆದ್ಯತೆ ನೀಡಿದ್ದಾರೆ. ಕಡ್ಡಾಯವಾಗಿ ಕ್ಷೇತ್ರದಲ್ಲಿ ಪ್ರವಾಸ, ಕಾಮಗಾರಿಗಳ ಪರಿಶೀಲನೆ, ಜನರ ದೂರುಗಳಿಗೆ ತಕ್ಷಣದ ಸ್ಪಂದನೆ – ಇದೇ ಅರವಿಂದ ಲಿಂಬಾವಳಿಯವರ ದಿನಚರಿಯಾಗಿದೆ.
ದೇಶದಲ್ಲಿ ಹೆಡೆಯೆತ್ತಿದ ಭಯೋತ್ಪಾದನೆಯ ವಿರುದ್ಧ ರಾಜ್ಯವ್ಯಾಪಿ ಆಂದೋಲನವನ್ನು ಸರ್ಕಾರದಲ್ಲಿದ್ದಾಗಲೇ ರೂಪಿಸಿ, ಯುವಸಮುದಾಯವನ್ನು ಜಾಗೃತಗೊಳಿಸಲು ಅರವಿಂದ ಲಿಂಬಾವಳಿ ದಿಟ್ಟ ಯತ್ನ ನಡೆಸಿದರು. ರಾಜ್ಯದ ಬೀದಿಬೀದಿಗಳಲ್ಲಿ, ಕ್ಯಾಂಪಸ್‌ಗಳಲ್ಲಿ `ಭಯೋತ್ಪಾದನೆ ಅಳಿಸಿ, ದೇಶ ಉಳಿಸಿ’ ಘೋಷಣೆ ಮೊಳಗಿತು. ಬೆಂಗಳೂರಿನಲ್ಲಿ ೨೦೦೯ರ ಫೆಬ್ರುವರಿ ೨೮ರಂದು ನಡೆದ ಅಭಿಯಾನದ ಸಮಾರೋಪ ಕಾರ್ಯಕ್ರಮವೂ ಲಕ್ಷಗಟ್ಟಳೆ ವಿದ್ಯಾರ್ಥಿಗಳನ್ನು ಸೆಳೆಯಿತು. ನಾಡಿನ, ದೇಶದ ಅರವಿಂದ ಲಿಂಬಾವಳಿ ವ್ಯಕ್ತಿತ್ವಕ್ಕೆ ಉತ್ಪ್ರೇಕ್ಷೆಯ ಕಿರೀಟ ಬೇಕಿಲ್ಲ. ಅವರ ಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸಲು ಇಂಥದ್ದೊಂದು ಸರಳ ಪುಸ್ತಕವೇ ಸಾಕು.
ಸ್ಥಾನಮಾನಗಳ ಬಗ್ಗೆ ಚಿಂತಿಸದೆ ಸಮಾಜದ ಬಗ್ಗೆ ಭಾವತೀವ್ರತೆಯಿಂದ ಕೆಲಸ ಮಾಡಿದ ನಾಯಕನಲ್ಲಿ ಅತೀವ ಆತ್ಮವಿಶ್ವಾಸ ಇರುತ್ತದೆ ಎಂಬ ಮಾತಿದೆ. ಅರವಿಂದ ಲಿಂಬಾವಳಿ ಇಂಥ ಸಮುದಾಯಕ್ಕೆ ಸೇರಿದ ವ್ಯಕ್ತಿತ್ವ. ಅರವಿಂದ ಲಿಂಬಾವಳಿಯವರ ದೃಢ ಆತ್ಮವಿಶ್ವಾಸವೇ ಅವರಿಗೆ ದಾರಿ. ಜನರ ಆಶೀರ್ವಾದವೇ ಅವರ ದಾರಿದೀಪ.