ಮಹದೇವಪುರ. ಕ್ಷೇತ್ರದಲ್ಲಿ ಗ್ರಾಮೀಣ ಸೊಗಡಿನ ಹಳ್ಳಿಗಳಿವೆ; ಆಧುನಿಕತೆಯ ಪ್ರಭಾವದ ನಗರಪ್ರದೇಶಗಳಿವೆ; ಹಳ್ಳಿಯೋ ನಗರವೋ ಎಂದು ಗೊತ್ತಾಗದ ಅರೆಪಟ್ಟಣಗಳಿವೆ. ಇಲ್ಲಿ ಸ್ಥಳೀಯ ಉದ್ದಿಮೆಗಳೂ ಹರಡಿವೆ; ನೂರಾರು ವಿಶ್ವಖ್ಯಾತಿಯ ಕಂಪೆನಿಗಳೂ ಸ್ಥಾಪನೆಯಾಗಿವೆ. ತಳಮಟ್ಟದ ಕಾರ್ಮಿಕರಿಂದ ಹಿಡಿದು ಬಹುರಾಷ್ಟ್ರೀಯ ಸ್ತರದ ಉದ್ಯೋಗಿಗಳು ಕ್ಷೇತ್ರದೆಲ್ಲೆಡೆ ಇದ್ದಾರೆ. ಭಾಷೆ, ಪಂಥ, ಆಚರಣೆ, ಧಾರ್ಮಿಕ ವೈವಿಧ್ಯ – ಹೌದು. ಮಹದೇವಪುರವೂ ಭಾರತದಂತೆಯೇ ವೈವಿಧ್ಯಗಳ ಆಗರ. ಅನಿವಾಸಿ ಭಾರತೀಯರೂ ಇಲ್ಲೇ ಹೆಚ್ಚು ಎಂದಮೇಲೆ ಈ ಕ್ಷೇತ್ರದ ವ್ಯಾಪ್ತಿಯನ್ನು ಊಹಿಸಿಕೊಳ್ಳಿ! ಈಶ್ವರನ ಹೆಸರು ಹೊತ್ತ ಈ ಪ್ರದೇಶದಲ್ಲಿ ನಿಜಕ್ಕೂ ಕಾಯಕವೇ ಕೈಲಾಸ!

ಇಂಥ ವೈವಿಧ್ಯಮಯ ಕ್ಷೇತ್ರವು ನಾಲ್ಕು ವರ್ಷಗಳ ಹಿಂದೆ ಬಹುಮುಖೀ ಅನುಭವದ ನೆಲೆಯಲ್ಲಿ ಬೆಳೆದ ಅರವಿಂದ ಲಿಂಬಾವಳಿಯವರನ್ನು ಆಯ್ಕೆ ಮಾಡಿದ್ದು ಸಹಜವೇ ಆಗಿತ್ತು. ತನ್ನ ಆಯ್ಕೆಗೆ ನ್ಯಾಯ ಒದಗಿಸಲು ಅರವಿಂದ ಲಿಂಬಾವಳಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇವೆಲ್ಲ ಕೆಲಸಗಳನ್ನೂ ಪಾರದರ್ಶಕ ವ್ಯವಸ್ಥೆಯ ಮೂಲಕ, ಗುಣಮಟ್ಟಕ್ಕೆ ರಾಜಿ ಇಲ್ಲದಂತೆ ಪೂರ್ಣಗೊಳಿಸಲಾಗಿದೆ ಎಂಬುದು ಅರವಿಂದ ಲಿಂಬಾವಳಿಯವರ ವಿನಮ್ರ ಹೇಳಿಕೆ.

ರಸ್ತೆಗಳ ಡಾಂಬರೀಕರಣ, ಕಾಂಕ್ರಿಟೀಕರಣ, ಸೇತುವೆ ನಿರ್ಮಾಣ, ಚರಂಡಿ – ಒಳಚರಂಡಿಗಳ ದುರಸ್ತಿ ಮತ್ತು ನಿರ್ಮಾಣ, ಪಾದಚಾರಿ ಮಾರ್ಗಗಳ ನಿರ್ಮಾಣ, ಬೀದಿ ದೀಪ, ಕೊಳವೆ ಬಾವಿಗಳು, ಕೆರೆ ಅಭಿವೃದ್ಧಿ, ಸಮುದಾಯ ಭವನಗಳು, ಶೌಚಾಲಯಗಳು, ಗ್ರಾಮಗಳ ರಸ್ತೆಗಳು, ಹೈ ಮಾಸ್ಟ್‌ಗಳು, ಸ್ತ್ರೀ ಶಕ್ತಿ ಸಮುದಾಯ ಭವನಗಳು, ಶಾಲಾ ಕೊಠಡಿಗಳು, – ಹೀಗೆ ಸರ್ವಾಂಗೀಣ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಸಮಾಜದ ಪರಿಶಿಷ್ಟ ಮತ್ತು ಹಿಂದುಳಿದ ವರ್ಗಗಳಿಂದ ಹಿಡಿದು ಸರ್ವಸ್ಪರ್ಶಿಯಾಗಿ ನಡೆದ ಈ ಕಾಮಗಾರಿಗಳೇ ಅರವಿಂದ ಲಿಂಬಾವಳಿಯವರ ಶಾಸಕತ್ವದ ಹೊಣೆಗಾರಿಕೆಯ ಯಶಸ್ವೀ ನಿರ್ವಹಣೆಗೆ ನಿದರ್ಶನ. ಹೀಗೆ ಪೂರ್ಣಗೊಂಡ ಹಲವು ಕಾಮಗಾರಿಗಳು ಮತ್ತು ವಿವಿಧ ಹಂತಗಳಲ್ಲಿ ಮುಂದುವರಿದಿರುವ ಕಾಮಗಾರಿಗಳೇ ಅರವಿಂದ ಲಿಂಬಾವಳಿಯವರಿಗೆ ಖುಷಿ ತಂದ ಕೆಲಸ. ಕಾರ್ಯಕರ್ತರು ಮತ್ತು ಸಾರ್ವಜನಿಕರ ಪರಿವೀಕ್ಷಣೆ, ಅಧಿಕಾರಿಗಳ ಬೆಂಬಲದಿಂದ ಈ ಎಲ್ಲ ಕಾಮಗಾರಿಗಳೂ ಸಕಾಲದಲ್ಲೇ ಪೂರ್ಣಗೊಂಡ ಸಮಾಧಾನವೂ ಅರವಿಂದ ಲಿಂಬಾವಳಿಯವರಿಗೆ ಇದೆ.

ಮೊದಲು ಹಳ್ಳ-ದಿಣ್ಣೆಗಳಿಂದ ಕೂಡಿದ ಕಳಪೆ ರಸ್ತೆಗಳಿದ್ದ ಮಹದೇವಪುರದಲ್ಲಿ ಈಗ ಡಾಂಬರು ರಸ್ತೆಗಳದ್ದೇ ದರ್ಬಾರು. ನಿರ್ವಹಣೆ ಇಲ್ಲದೇ ಬರಡಾಗಿದ್ದ ಪ್ರದೇಶಗಳಲ್ಲಿ ಸಾರ್ವಜನಿಕ ಉದ್ಯಾನಗಳಿವೆ. ಹೂಳು ತುಂಬಿ ಹಾಳಾಗಿದ್ದ ಚರಂಡಿಗಳೀಗ ದುರಸ್ತಿಗೊಂಡಿವೆ. ಸಾರ್ವಜನಿಕ ನೈರ್ಮಲ್ಯ ಎದ್ದು ಕಾಣುತ್ತಿದೆ.

ಮಹದೇವಪುರದ ಸಾಮಾಜಿಕ ಸ್ವಾಸ್ಥ್ಯವೂ ಮಾದರಿ ಪ್ರಮಾಣದಲ್ಲಿ ಸುಧಾರಿಸಿದೆ. ಇಡೀ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಒಂದೂ ಜಾತಿ ವಿದ್ವೇಷದ ಪ್ರಕರಣ ದಾಖಲಾಗಿಲ್ಲ. ಅಪರಾಧ ಪ್ರಮಾಣವೂ ಕುಗ್ಗಿರುವುದಕ್ಕೆ ಅಂಕಿ – ಅಂಶಗಳೇ ನಿದರ್ಶನ. ಒಟ್ಟಾರೆ ಮಹದೇವಪುರವೀಗ ಹೊಸ ಸೃಷ್ಟಿಯ ಬೀಡು ಎನ್ನಬಹುದು.

ಇದು ಅರವಿಂದ ಲಿಂಬಾವಳಿಯವರು ಹಟ ಹಿಡಿದು ಜನಪರ ಕೆಲಸ ಮಾಡಿಸಿದ್ದಕ್ಕೆ ಒಂದು ಪುಟ್ಟ ನಿದರ್ಶನ. ಮಹದೇವಪುರದ ಎಲ್ಲ ವಾರ್ಡ್‌ಗಳಲ್ಲಿ ಇಂಥ ಅಸಂಖ್ಯ ಕಾಮಗಾರಿಗಳಿಗೆ ಜೀವ ತಂದು ಸಮರ್ಪಕವಾಗಿ ಪೂರ್ಣಗೊಳಿಸಲಾಗಿದೆ.

ಕ್ಷೇತ್ರದ ಅಭಿವೃದ್ಧಿಗೆ ಇಲ್ಲಿನ ಹಲವಾರು ಸಂಘ ಸಂಸ್ಥೆಗಳು ನೀಡಿದ ಸಹಕಾರವೂ ಮುಖ್ಯವಾಗಿತ್ತು. ಹಲವು ಸಾರ್ವಜನಿಕರು, ಅಧಿಕಾರಿಗಳು ಮತ್ತು ಕಾರ್ಯಕರ್ತರು ನೀಡಿದ ಸಹಕಾರ, ಭಾಗಿತ್ವ – ಎಲ್ಲವನ್ನೂ ಅರವಿಂದ ಲಿಂಬಾವಳಿ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಎಲ್ಲರ ಅಭಿಮಾನ, ಪ್ರೀತಿ ಮತ್ತು ಕ್ರಿಯಾಶೀಲ ಬೆಂಬಲ – ಇವೇ ತನ್ನ ಸಾಧನೆಯ ಹಿಂದಿನ ಗುಟ್ಟು ಎಂದು ಅರವಿಂದ ಲಿಂಬಾವಳಿ ಹೃತ್ಪೂರ್ವಕವಾಗಿ ತಿಳಿಸುತ್ತಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಕಂಡುಬಂದ ಬದಲಾವಣೆಗಳೇನು? ಹಿಂದುಳಿದ ಪ್ರದೇಶಗಳ ಅಧ್ಯಯನ ನಡೆಸಿದ ಡಾ. ಡಿ ಎಂ ನಂಜುಂಡಪ್ಪ ಸಮಿತಿಯ ವರದಿಯನ್ನು ಆಳವಾಗಿ ಓದಿರುವ ಅರವಿಂದ ಲಿಂಬಾವಳಿಯವರಿಗೆ ಈ ಕ್ಷೇತ್ರಕ್ಕೆ ಮೊಟ್ಟಮೊದಲು ಕಾಲಿಟ್ಟಾಗ ಅನ್ನಿಸಿದ್ದೇನು ಗೊತ್ತೆ? ‘ಇಲ್ಲಿಗೆ ನಂಜುಂಡಪ್ಪನವರು ಬರಬಾರದಿತ್ತೇ’ ಎಂಬ ಉದ್ಗಾರ! ಮತ ಯಾಚನೆಗೆ ಹೋದಾಗ ಸಾರ್ವಜನಿಕರು ಸವಾಲು ಹಾಕುತ್ತಿದ್ದರು; ‘ಈ ಕೆಲಸ ಮಾಡ್ತೀರ? ಆ ಕೆಲಸ ಮಾಡ್ತೀರ?’ ಎಂದು ಪಂಥಾಹ್ವಾನ ನೀಡಿದರು. ಎಲ್ಲೂ ಭರವಸೆಗಳನ್ನು ನೀಡದ ಅರವಿಂದ ಲಿಂಬಾವಳಿಯವರು ಮೌನಕ್ಕೆ ಶರಣಾಗಿದ್ದು ನಿಜವೇ.

ರಸ್ತೆಗಳೇ ಇಲ್ಲದ ಸ್ಥಿತಿ; ಶೌಚಾಲಯಗಳಿಲ್ಲದ, ಶಿಕ್ಷಕರೂ ಇಲ್ಲದ ಶಾಲೆಗಳು, ಸೇತುವೆಗಳೇ ಇಲ್ಲದ ಕೊಂಡಿ ರಸ್ತೆಗಳು; ಭೂ ಒತ್ತುವರಿಯ ನೂರಾರು ಉದಾಹರಣೆಗಳು. ಇದು ಮಹದೇವಪುರದ ಸ್ಥಿತಿಯಾಗಿತ್ತು.

ಈಗ ಸನ್ನಿವೇಶ ಬದಲಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಸಮಯ ಬಂದಿದೆ. ರಸ್ತೆ, ಒಳಚರಂಡಿ, ಪಾದಚಾರಿ ಮಾರ್ಗ, ವಿದ್ಯುತ್, ನೀರು, ಒತ್ತುವರಿ ತೆರವು, ನಿವಾಸಿಗಳಿಗೆ ಹಕ್ಕುಪತ್ರ , – ಹೀಗೆ ಹಲವು ಆಯಾಮಗಳಲ್ಲಿ ಕೆಲಸಕಾರ್ಯಗಳು ನಡೆದಿವೆ.

ವಿಧಾನಸಭಾ ಸದಸ್ಯತ್ವದ ಮೊಟ್ಟಮೊದಲ ಅವಧಿಯ ಮೊದಲ ನಾಲ್ಕು ವರ್ಷಗಳಲ್ಲಿ ಸಾಧಿಸಿದ ಯಶದ ಜೊತೆಗೇ ಸಾಧಿಸಬೇಕಾದ ಕೆಲಸಗಳ ಪಟ್ಟಿಯನ್ನೂ ಅರವಿಂದ ಲಿಂಬಾವಳಿ ತಮ್ಮ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದಾರೆ. ಅವರ ಡೈರಿಯಲ್ಲಿ ಎಂಟ್ರಿ ಆದಮೇಲೆ ಅವೆಲ್ಲ ತಾರ್ಕಿಕ ಕೊನೆ ಕಾಣುತ್ತವೆ ಎನ್ನುವುದು ಕ್ಷೇತ್ರದ ನಿವಾಸಿಗಳ ಅನುಭವದ ಮಾತು! ಉದಾಹರಣೆಗೆ ಕ್ಷೇತ್ರಕ್ಕೆ ಒಂದು ದೊಡ್ಡ ಆಸ್ಪತ್ರೆ ಬೇಕು, ಕ್ಷೇತ್ರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕು – ಈ ಎರಡು ಪ್ರಮುಖ ಅಗತ್ಯಗಳನ್ನು ಅರವಿಂದ ಲಿಂಬಾವಳಿ ಚೆನ್ನಾಗಿ ಅರಿತಿದ್ದಾರೆ. ಕೆರೆಗಳ ಸಂರಕ್ಷಣೆ, ಅಂತರ್ಜಲ ಹೆಚ್ಚಿಸಲು, ಕೆರೆಗಳ ಜಾಲದ ಮೂಲಕ ನೀರಿನ ಕೊರತೆ ನೀಗಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ.

ಒಂದು ಅವಧಿಯಲ್ಲಿ ಇಷ್ಟೆಲ್ಲ ಆಗಿದೆ ಎಂಬುದಕ್ಕೆ ಕಣ್ಣೆದುರೇ ಪುರಾವೆಗಳು ಕಾಣುವಾಗ, ಮುಂದಿನ ದಿನಗಳಲ್ಲೂ ಇಂಥದ್ದೇ ಅಭಿವೃದ್ಧಿ ಕಾರ್ಯ ನಡೆಯುತ್ತದೆ ಎಂಬ ಭರವಸೆಯನ್ನು ಇಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ.

ಪಾರದರ್ಶಕ ಜನಸೇವೆಯೇ ಅರವಿಂದ ಲಿಂಬಾವಳಿಯವರ ಯಶಸ್ಸಿನ ಸೂತ್ರ. ಈ ಎಲ್ಲ ಅಭಿವೃದ್ಧಿ ಕಾಮಗಾರಿಯ ವಿವರಗಳನ್ನು ನೀವೇ ನೋಡಿ, ಗಮನಿಸಿ, ಪರಿಶೀಲಿಸಿ. ವ್ಯತ್ಯಾಸ ಕಂಡುಬಂದರೆ ದಯವಿಟ್ಟು ಅವರ ಗಮನಕ್ಕೆ ತನ್ನಿ. ಕುಂದು – ಕೊರತೆಗಳನ್ನು ಗಮನಿಸಿ ಅವುಗಳಿಗೆ ಪರಿಹಾರ ನೀಡುವುದಕ್ಕೆ ಅರವಿಂದ ಲಿಂಬಾವಳಿ ಸದಾ ಮುಂದು. ಅಲ್ಲಲ್ಲಿ ಯಾವುದೇ ಕಾಮಗಾರಿ ವಿಳಂಬವಾಗಿದ್ದರೆ, ಗುಣಮಟ್ಟ ಇಲ್ಲ ಎನ್ನಿಸಿದರೆ ಈ ಬಗ್ಗೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ವಿನಮ್ರತೆ ಅವರಿಗಿದೆ.